ಚರಣದಾಸಿಗಳು-
ಭಾರತೀಯ ವೈಷ್ಣವಮಾರ್ಗಾನುಯಾಯಿಗಳ ಒಂದು ಪಂಥ. ಚರಣದಾಸನೆಂಬಾತ (1703-1783) ಈ ಪಂಥದ ಪ್ರವರ್ತಕ. ಆದ್ದರಿಂದ ಈತನ ಅನುಯಾಯಿಗಳಿಗೆ ಚರಣದಾಸಿಗಳು ಎಂಬ ಹೆಸರು.
ಚರಣದಾಸನ ಬಾಲ್ಯನಾಮ ರಣಜೀತ್. ತಂದೆ ಮುರಲೀಧರ್. ತಾಯಿ ಕುಂಜೊ, ಮೇವಾತ್‍ಗೆ (ರಾಜಾಸ್ಥಾನ) ಸೇರಿದ ಡೆಹರಾ ಗ್ರಾಮ ಈತನ ಜನ್ಮ ಸ್ಥಳ. ಈತನ ತಾಯಿತಂದೆಯವರು ಬನಿಯಾ ಜಾತಿಯ ಢೂಸರ್ ಪಂಗಡಕ್ಕೆ ಸೇರಿದವರು.
ಚರಣದಾಸನ ದಾರ್ಶನಿಕ ಜೀವನದೃಷ್ಟಿ ಆತನಿಗೆ ಪೈತೃಕವಾಗಿ ಬಂದುದೆನ್ನಬಹುದು. ಮುರಲೀಧರ ದೈವಭಕ್ತ. ಸದಾ ಧ್ಯಾನಮಗ್ನನಾಗಿರುತ್ತಿದ್ದ. ಗಿರಿ, ವನ, ಕಂದರಾದಿಗಳ ರಮಣೀಯತೆಗೆ ಮಾರುಹೋಗಿದ್ದ ಆತ ಎಷ್ಟೋ ದಿನ ಮನೆಗೇ ಬರುತ್ತಿರಲಿಲ್ಲ. ಕೊನೆಗೊಮ್ಮೆ ಆತ ಬರಲೇ ಇಲ್ಲ. ಕಂಗಾಲಾದ ತಾಯಿ ಚೊತ್ತಗಾಲಿನ, ಹತ್ತೊಂಬತ್ತು ಪ್ರಾಯದ ಮಗನನ್ನು ಕರೆದುಕೊಂಡು ತನ್ನ ತಂದೆ ಮನೆಯನ್ನು ಬಿಟ್ಟು ದೆಹಲಿಗೆ ನಡೆದಳು.
ದೆಹಲಿ ಚರಣದಾಸನ ಜೀವನವನ್ನೇ ಬದಲಾಯಿಸಿಬಿಟ್ಟಿತು. ಮೊದಲೇ ದೈವಭಕ್ತನಾದ ಈತನಿಗೆ ಶುಕದೇವದಾಸ್ ಎಂಬ ಗುರು ಸಿಕ್ಕು ಆತನಿಂದ ರಾಮಮಂತ್ರ ಜಪದ ಉಪದೇಶ ದೊರೆಯಿತು. ಬಾಲಕ ರಣಜೀತ್ ಸಿದ್ಧಿಮಾರ್ಗದ ಭಾವುಕ ಪಥಿಕನಾದ. ರಣಜೀತ್ ಚರಣದಾಸನಾಗಿ ಹನ್ನೆರಡು ವರ್ಷ ದೆಹಲಿಯ ಹತ್ತಿರದ ಗವಿಯೊಂದರಲ್ಲಿ ನಿರಂತರ ರಾಮನಾಮಜಪ ಮತ್ತು ಧಾನ್ಯಗಳಲ್ಲಿ ಮಗ್ನನಾಗಿ ತನ್ನದೇ ಆದ ಭಕ್ತಿಮಾರ್ಗವೊಂದನ್ನು ಕಂಡರಿಸಿಕೊಂಡ.

ಆಗಿನ ಕಾಲಕ್ಕೆ ಮೊಗಲರ ಕೊನೆಯ ಪ್ರಬಲ ಚಕ್ರವರ್ತಿ ಔರಂಗಜೇಬ್ ಗತಿಸಿ ಹೋಗಿ ದೆಹಲಿಯ ಸಿಂಹಾಸನಕ್ಕೆ ಕಿತ್ತಾಟ ನಡೆಯುತ್ತಿತ್ತು. ನಾದಿರ್‍ಷಹನ ದಂಡಯಾತ್ರೆಯ (1739) ರಾಕ್ಷಸೀ ಪರಿಣಾಮ ಉತ್ತರಭಾರತದ ಜನತೆಯ ಮನಃಪಟಲವನ್ನು ಕೆಂದೂಳಿಯಿಂದ ಆವರಿಸಿತ್ತು. ಪಂಜಾಬಿನಲ್ಲಿ ಅಹಮದ್ದ ಷಾ ಅಬ್ದಾಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿಕೊಂಡು ದಕ್ಷಿಣದಲ್ಲಿ ಅಪ್ರತಿಹತ ಬಲನಾಗಿ ಉತ್ತರಕ್ಕೆ ವ್ಯಾಪಿಸುತ್ತಿದ್ದ ಮರಾಠರ ಬಾಲಾಜಿ ಬಾಜೀರಾಯನನ್ನು ಪಾಣಿಪಟ್ಟದ ಯುದ್ಧದಲ್ಲಿ (1976) ಸೋಲಿಸಿದ್ದ. ಮತ್ತೊಂದು ಕಡೆಯಿಂದ ಪೂರ್ವ ಬಂಗಾಳದಲ್ಲಿ ಬ್ರಿಟಿಷರು ಪ್ರಬಲರಾಗಿ ಆಗ್ರ, ಅಯೋಧ್ಯೆಗಳ ಕಡೆ ಒತ್ತಿ ಬರುತ್ತಿದ್ದರು. ಮೂರು ಕಡೆಯ ಇಂಥ ಒತ್ತಡ, ಔರಂಗಜೇಬನ ಹಿಂದೂ ಮತ ದ್ವೇಷ, ರಾಜಕೀಯ ದಿಗಂತದಲ್ಲಿ ಅನಿರೀಕ್ಷಿತ, ಅಪರಿಚಿತ ಭಯಂಕರ ಕಾರ್ಮೋಡಗಳ ವಿಜೃಂಭಣೆ- ಇವು ಹಿಂದೂಗಳ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಜೀವನದಲ್ಲಿ ಹಿಂದೆಂದೂ ಇಲ್ಲದ ಕೋಲಾಹಲವನ್ನೆಬ್ಬಿಸಿದ್ದುವು. ದೆಹಲಿ ಇಂಥ ಕೋಲಾಹಲದ ಕೇಂದ್ರಸ್ಥಾನವಾಗಿತ್ತು.

ಈ ಲೌಕಿಕ ಹಿನ್ನೆಲೆಯಲ್ಲಿ, ನಾನಕ್, ಕಬೀರ್, ರಾಮಾನಂದರೇ ಇತ್ಯಾದಿ ಭಕ್ತಿಮಾರ್ಗಬೋಧಕರ ಬೋಧನೆಗಳು ಜನಸಾಮಾನ್ಯರಲ್ಲಿ ಮಾಸಿಹೋಗುತ್ತಿರುವಂತೆ ಭಾಸವಾಗುತ್ತಿದ್ದ ಸಮಯದಲ್ಲಿ ಚರಣದಾಸ ತನ್ನ ಭಕ್ತಿಮಾರ್ಗವನ್ನು ಉಪದೇಶಿಸಲು ಉಪಕ್ರಮಿಸಿದ. ಆಧ್ಯಾತ್ಮಿಕ ಹಸಿವಿನಿಂದ ಕಂಗಾಲಾದ ಜನರು ಮುನ್ನಗ್ಗಿ ಬಂದು ಈತನ ಶಿಷ್ಯರಾದರು. ಹೀಗೆ ಆದ ಐವತ್ತೆರಡು ಜನ ಪ್ರಸಿದ್ಧ ಶಿಷ್ಯರಲ್ಲಿ ಗದ್ದೀ, ಯುಕ್ತಾನಂದ ಎಂಬುವರು ಸುಪ್ರಸಿದ್ದರು. ಸಹಜೂಬಾಯಿ, ದಯಾಬಾಯಿ ಮುಂತಾದವರು ಶಿಷ್ಯೆಯರಲ್ಲಿ ಅತಿ ಪ್ರಸಿದ್ಧರಾಗಿ ಭಾವುಕ ಕವಯಿತ್ರಿಯರೆಂದು ಹೆಸರುಪಡೆದರು.

ಚರಣದಾಸ ಎಷ್ಟೋ ಪವಾಡಗಳನ್ನು ಮೆರೆದನೆಂದು ಪ್ರತೀತಿಯಿದೆ. ಈತ ತನ್ನ ತಾಯಿಗೆ ಭಗವದ್ದರ್ಶನ ಮಾಡಿಸಿದನಂತೆ. ನಾದಿರ್ ಷಹ ಈತನನ್ನು ಹಿಡಿಸಿ ಸರಪಳಿಯಿಂದ ಬಂಧಿಸಿ ಕಾರಾಗೃಹದಲ್ಲಿರಿಸಿದ್ದರೂ ಹೇಗೋ ಎಂತೋ ಇದ್ದಕ್ಕಿದ್ದಂತೆ ನಡುರಾತ್ರಿಯಲ್ಲಿ ಈತ ನಾದಿರ್‍ಷಹ ಮಲಗಿದ್ದ ಕೋಣೆಯಲ್ಲಿ ಪ್ರತ್ಯಕ್ಷನಾಗಿ ಬಲವಾದ ಒದೆತ ಕೊಡಲು ನಾಮದ ಮಾತ್ರದಿಂದಲೇ ದೇಶದೇಶಗಳನ್ನು ತಲ್ಲಣಗೊಳಿಸಿದ್ದ ಷಹ ಈ ಬಡಕಲು ಸಾಧುವಿನ ಕಾಲಿಗೆ ಬಿದ್ದು ಕ್ಷಮೆ ಕೇಳಿಕೊಂಡನಂತೆ. ಇದೇ ರೀತಿ ಅಲಂಗೀರನ ಮರಣವನ್ನೂ (1759) ಈತ ಮೊದಲೆ ಸೂಚಿಸಿದ್ದನಂತೆ.

ವೈಷ್ಣವಭಕ್ತಿಮಾರ್ಗ, ಗುರುವಿಗೆ ಅಲೌಕಿಕವಾದ ಪ್ರಾಮುಖ್ಯ, ಭಗವನ್ನಾಮ ಸ್ಮರಣೆ ಮತ್ತು ತಾರಕಮಂತ್ರಜಪ ಇವು ಚರಣದಾಸಿ ಪಂಥದ ಕೆಲವು ಮುಖ್ಯ ತತ್ತ್ವಗಳು. ಮೋಕ್ಷವೆಂದರೆ ಭಗವತ್‍ಸಾನಿಧ್ಯ, ಅದು ಅನಂತ, ಆನಂದಮಯ. ಆದರ ಜನ್ಮಾಂತರ ಕಳೆದಮೇಲೆ ಅದರ ವ್ಯಾಪ್ತಿ. ಗುರು ಒಂದು ಕೈಯಿಂದ ಧರ್ಮಬಾಹಿರವಾದ ಜೀವಾತ್ಮವನ್ನು ಮೇಲೆತ್ತಿ ಮತ್ತೊಂದು ಕೈಯಿಂದ ಭಗವತ್ ಸನ್ನಿಧಿಗೆ ಮುಟ್ಟಿಸುತ್ತಾನೆ. ಗುರವೇ ಹರಿ, ರಾಮ, ಕೃಷ್ಣ, ನರಸಿಂಹ. ಅವನೇ ಪ್ರತ್ಯಕ್ಷ ಭಗವಾನ್ ರಾಧಾಕೃಷ್ಣ. ಗುರು ಉಪದೇಶಿಸುವ, ತಾರಕಮಂತ್ರ ಸೀಮಾತೀತವಾದುದು (ಅನ್‍ಹದ್). ಅದೇ ಪರಬ್ರಹ್ಮ ಬ್ರಹ್ಮಾಂಡ, ಸೂರ್ಯಚಂದ್ರತಾರಾದಿಗಳನ್ನು ಒಳಗೊಂಡ ವಿಶ್ವ. ಅದು ಅವ್ಯಕ್ತ. ಆಗಮ್ಯ. ಅಂಥ ತಾರಕಮಂತ್ರವನ್ನು ನಿಂತಾಗ, ಕುಳಿತಾಗ, ಚಲಿಸುವಾಗ ಜಪಿಸಿದರೆ ಸಕಲಕರ್ಮಫಲವೂ ದಗ್ಧವಾಗುತ್ತದೆ.

ಚರಣದಾಸಿಗಳ ನೈತಿಕ ಭಾವನೆ ಇತರ ತಾತ್ತ್ವಿಕ ಧಾಮಿಕ ಪಂಥಗಳು ಹೇಳಿರುವಂಥದೇ. ಆದರೆ ನಿಷ್ಠುರ ಆಚರಣೆ ಮುಖ್ಯ. ಅಸತ್ಯ, ಪರನಿಂದೆ, ಕಾಠಿಣ್ಯ, ವಿತಂಡವಾದ ಇತ್ಯಾದಿ ನಿಷಿದ್ಧ. ನಿರಹಂಕಾರಿತ್ವ, ಅನಸೂಯೆ, ಅಸ್ತೇಯ, ಅಹಿಂಸೆ, ಸದಾಲೋಚನೆ, ಸತ್ಸಂಗ, ಗುರುಭಕ್ತಿ, ಹರಿಭಕ್ತಿ ಇವುಗಳನ್ನು ತಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವುದು, ತನ್ನ ಮಾಮೂಲು ಜೀವನಕ್ರಮದ ಪಾಲನೆ ಮುಂತಾದವು ವಿಧಿನಿಯಮಗಳು. ಜಾತಿಭೇದ, ವರ್ಣಭೇದ ಲಿಂಗಭೇದವಿಲ್ಲದೆ ಸರ್ವರಿಗೂ ಈ ಪಂಥಕ್ಕೆ ಪ್ರವೇಶವುಂಟು.

ಇತ್ತೀಚೆಗೆ ಈ ಪಂಥದವರ ಸಂಖ್ಯೆ ಕಡಿಮೆಯಾಗಿಹೋಗಿದೆ. ಈಗಿನ ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನದ ಕೆಲವು ಭಾಗಗಳಲ್ಲಿ ಇವರು ಕಂಡುಬರುತ್ತಾರೆ. ಸಾಲಿಗ್ರಾಮಮಣಿ ಇವರ ಪೂಜಾದೈವ. ತುಳಸೀ ವೃಂದಾವನಪೂಜೆಯೂ ರೂಢಿಗೆ ಬಂದಿದೆ. ವೇದಪುರಾಣಾದಿಗಳಲ್ಲಿ, ಮೂರ್ತಿ ಪೂಜೆಯಲ್ಲಿ, ವರ್ಣಾಶ್ರಮವ್ಯವಸ್ಥೆಯಲ್ಲಿ, ತೀರ್ಥಯಾತ್ರಾದಿ ಬಾಹ್ಯ ಆಚಾರಗಳಲ್ಲಿ ನಂಬುಗೆ ಇಡದೆ ಗುರುಭಕ್ತಿಯೊಂದನ್ನೇ ಪ್ರಧಾನವೆಂದು ಉಪದೇಶಿಸಿ ನವ್ಯ ಕ್ರಾಂತಿಯೊಂದನ್ನೆಬ್ಬಿಸಿತೋ ಎಂಬಂತಿದ್ದ ಈ ಪಂಥ ಇಂದು ನಾಮಾವಶೇಷವಾಗುವ ಸ್ಥಿತಿಯಲ್ಲಿದೆ. ಈ ಪಂಥದ ಸಾಧುಗಳು ಹಳದಿ ಪತ್ತಲ ಉಟ್ಟು, ಗೋಪೀಚಂದನ ಧರಿಸಿ, ಕೊರಳಲ್ಲಿ ತುಳಸೀಮಾಲೆ ಹಾಕಿಕೊಂಡು, ಶಂಖದಂಥ ಟೋಪಿಯಿಟ್ಟುಕೊಂಡು, ಅದರ ಮೇಲೆ ರುಮಾಲು ಕಟ್ಟಿಕೊಂಡು ಅಡ್ಡಾಡುವುದನ್ನು ಕಾಣಬಹುದು.

ಭಕ್ತಿಸಾರ, ಜ್ಞಾನಸರ್ವೋದಯ, ಸಂದೇಹಸಾಗರ, ನಚಿಕೇತೋಪಾಖ್ಯಾನ, ಚರಣದಾಸವಾಣಿ-ಮುಂತಾದುವು ಈ ಪಂಥದ ಕೃತಿಗಳು. ಅಚ್ಚನ್ನು ಕಾಣದೆ ನಶಿಸಿಹೋಗುತ್ತಿರುವುವು ಇನ್ನೂ ಎಷ್ಟೋ ಇವೆ.
(ಸಿ.ಜಿ.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ